ಡಿಜಿಟಲ್ ಯುಗದಲ್ಲಿ ಪಾಪ್ ಸೈಕಾಲಜಿ: ಟ್ರೆಂಡಿ ಪದಗಳು ಮತ್ತು ಅವುಗಳ ಪ್ರಭಾವ

ಇಂದಿನ ಡಿಜಿಟಲ್ ಯುಗದಲ್ಲಿ ಟಿಕ್‌ಟಾಕ್‌ನಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಮಾತನಾಡುವ ತಜ್ಞರು ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಮಾನಸಿಕ ಆರೋಗ್ಯದ ಮಾಹಿತಿಯನ್ನು ನೀಡುವ ಪೋಸ್ಟ್‌ಗಳು ತುಂಬಾ ಸಾಮಾನ್ಯವಾಗಿವೆ. ಇದರ ಜೊತೆಗೆ ಪಾಪ್ ಸೈಕಾಲಜಿ (Pop Psychology) ಅಂದರೆ ಮನಸ್ಸು ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಸಾಮಾನ್ಯವಾಗಿ ಹರಡುವ ಮಾಹಿತಿಯೂ ಬಹಳ ಜನಪ್ರಿಯವಾಗುತ್ತಿದೆ.

ವಿಶೇಷವಾಗಿ Gen Z ಮತ್ತು Gen Alpha ಯುವಕರು ತಮ್ಮ ಮನಸ್ಸಿನಲ್ಲಿರುವ ಭಾವನೆಗಳು ಮತ್ತು ಸಮಸ್ಯೆಗಳನ್ನು ಹೇಳಿಕೊಳ್ಳಲು ಇಂತಹ ಹೊಸ ಪದಗಳನ್ನು ಹೆಚ್ಚು ಬಳಸುತ್ತಿದ್ದಾರೆ.

ಹಾಗಾದರೆ, ಈ ಹೊಸ ಪದಗಳು ನಮ್ಮ ಮಾನಸಿಕ ಆರೋಗ್ಯವನ್ನು ಅರ್ಥಮಾಡಿಕೊಳ್ಳುವ ರೀತಿಯನ್ನು ಹೇಗೆ ಬದಲಾಯಿಸುತ್ತಿವೆ?

ನಮ್ಮ ದಿನನಿತ್ಯದ ಮಾತುಗಳಲ್ಲಿ ಮನೋವಿಜ್ಞಾನದ ಪದಗಳು

ಸಾಮಾಜಿಕ ಮಾಧ್ಯಮಗಳಲ್ಲಿ ನಾವು ಈಗ ಹಲವಾರು ಮನೋವಿಜ್ಞಾನದ ಪದಗಳನ್ನು ಕೇಳುತ್ತೇವೆ. ಉದಾಹರಣೆಗೆ “Trauma Dumping”, “Emotional Bandwidth” ಮತ್ತು “Setting Boundaries” ಮುಂತಾದ ಪದಗಳು ಈಗ ಸಾಮಾನ್ಯ ಮಾತುಗಳಲ್ಲೂ ಬಳಕೆಯಾಗುತ್ತಿವೆ.

ಈ ಪದಗಳು ಕೆಲವು ಕಷ್ಟವಾದ ವಿಚಾರಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತವೆ. ಆದರೆ ಅವುಗಳನ್ನು ಎಲ್ಲ ಸಂದರ್ಭಗಳಿಗೂ ಬಳಸುವುದು ಸರಿಯಲ್ಲ.

ಟಿಕ್‌ಟಾಕ್‌ನಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಇರುವ ತಪ್ಪು ನಂಬಿಕೆಗಳನ್ನು ವಿವರಿಸುವ ಮನೋವಿಜ್ಞಾನ ಪ್ರಾಧ್ಯಾಪಕಿ ಡಾ. ಇನ್ನಾ ಕನೆವ್ಸ್ಕಿ (Dr. Inna Kanevsky) ಹೇಳುವಂತೆ, ಕೆಲವು ಮನೋವಿಜ್ಞಾನದ ಪದಗಳನ್ನು ತುಂಬಾ ಸಾಮಾನ್ಯವಾಗಿ ಮತ್ತು ತಪ್ಪಾಗಿ ಬಳಸಲಾಗುತ್ತಿದೆ. ಇದರಿಂದ ಆ ಪದಗಳ ನಿಜವಾದ ಅರ್ಥವೇ ಕಳೆದುಹೋಗಬಹುದು.

ಟಿಕ್‌ಟಾಕ್ ಮತ್ತು ಪಾಪ್ ಸೈಕಾಲಜಿ

ಮನೋವಿಜ್ಞಾನದ ಹೊಸ ವಿಚಾರಗಳು ಮತ್ತು ಪದಗಳು ಜನರಿಗೆ ತಲುಪಲು ಟಿಕ್‌ಟಾಕ್ ಒಂದು ದೊಡ್ಡ ವೇದಿಕೆಯಾಗಿದೆ.

#MentalHealthAwareness ಎಂಬ ಹ್ಯಾಶ್‌ಟ್ಯಾಗ್‌ ಅನ್ನು ಕೋಟ್ಯಂತರ ಜನರು ನೋಡಿದ್ದಾರೆ.

ಇದರಿಂದ ಮಾನಸಿಕ ಆರೋಗ್ಯದ ಬಗ್ಗೆ ಜನರಲ್ಲಿ ಅರಿವು ಹೆಚ್ಚುತ್ತಿದೆ. ಮಾನಸಿಕ ಸಮಸ್ಯೆಗಳ ಬಗ್ಗೆ ಮಾತನಾಡಲು ಇದ್ದ ಭಯ ಮತ್ತು ಮುಜುಗರವೂ ಕಡಿಮೆಯಾಗಬಹುದು.

ಆದರೆ ಇದರಲ್ಲೂ ಕೆಲವು ಸಮಸ್ಯೆಗಳಿವೆ.

ಉದಾಹರಣೆಗೆ “Personality-maxxing” ಎಂದರೆ, ಇತರರ ಮುಂದೆ ಇನ್ನಷ್ಟು ಒಳ್ಳೆಯವರಾಗಿ ಕಾಣಲು ಅಥವಾ ಸಾಮಾಜಿಕವಾಗಿ ಯಶಸ್ವಿಯಾಗಲು ತಮ್ಮ ವ್ಯಕ್ತಿತ್ವವನ್ನು ನಿರಂತರವಾಗಿ ಬದಲಾಯಿಸಿಕೊಳ್ಳುವ ಪ್ರಯತ್ನ.

ಅದೇ ರೀತಿ “Main Character Energy” ಎಂದರೆ, ನಮ್ಮ ಜೀವನದಲ್ಲಿ ನಾವೇ ಸಿನಿಮಾದ ಮುಖ್ಯ ಪಾತ್ರ ಎಂಬಂತೆ ಬದುಕುವ ಆಲೋಚನೆ.

ಇದು ಕೆಲವರಿಗೆ ಆತ್ಮವಿಶ್ವಾಸ ಕೊಡಬಹುದು. ಆದರೆ ಇದನ್ನು ಅತಿಯಾಗಿ ತೆಗೆದುಕೊಂಡರೆ, “ನಾನೇ ಎಲ್ಲದರ ಕೇಂದ್ರ” ಎಂಬ ಭಾವನೆ ಬರಬಹುದು. ಜೀವನದ ಬಗ್ಗೆ ಅತಿಯಾದ ಮತ್ತು ನಿಜವಾಗದ ನಿರೀಕ್ಷೆಗಳೂ ಬೆಳೆಯಬಹುದು.

ಸಾಮಾಜಿಕ ಮಾಧ್ಯಮದಿಂದಲೇ ತಮಗೆ ತಾವು ರೋಗನಿರ್ಣಯ ಮಾಡಿಕೊಳ್ಳುವುದು

Gen Z ಮತ್ತು Gen Alpha ಯುವಕರು ಮಾನಸಿಕ ಆರೋಗ್ಯದ ಬಗ್ಗೆ ತಿಳಿದುಕೊಳ್ಳಲು ಸಾಮಾಜಿಕ ಮಾಧ್ಯಮಗಳನ್ನು ಹೆಚ್ಚು ಬಳಸುತ್ತಿದ್ದಾರೆ.

“Neurodivergent”, “High-functioning Anxiety” ಮತ್ತು “Rejection Sensitive Dysphoria” ಮುಂತಾದ ಪದಗಳು ಆನ್‌ಲೈನ್‌ನಲ್ಲಿ ಹೆಚ್ಚು ಕೇಳಿಬರುತ್ತಿವೆ.

ಮಾನಸಿಕ ಆರೋಗ್ಯದ ಬಗ್ಗೆ ಅರಿವು ಹೆಚ್ಚುವುದು ಒಳ್ಳೆಯ ವಿಷಯ. ಇದರಿಂದ ಅಗತ್ಯವಿದ್ದಾಗ ತಜ್ಞರ ಸಹಾಯ ಪಡೆಯಲು ಜನರಿಗೆ ಧೈರ್ಯ ಬರಬಹುದು.

ಆದರೆ ಸಾಮಾಜಿಕ ಮಾಧ್ಯಮದಲ್ಲಿ ಒಂದು ವಿಡಿಯೋ ನೋಡಿದ ತಕ್ಷಣ, “ನನಗೂ ಇದೇ ಸಮಸ್ಯೆ ಇದೆ” ಎಂದು ತೀರ್ಮಾನಿಸಿಕೊಳ್ಳುವುದು ಅಪಾಯಕಾರಿ.

ಟಿಕ್‌ಟಾಕ್‌ನಲ್ಲಿ ಲಕ್ಷಾಂತರ ಫಾಲೋವರ್‌ಗಳನ್ನು ಹೊಂದಿರುವ ಮನೋವಿಜ್ಞಾನಿ ಡಾ. ಜೂಲಿ ಸ್ಮಿತ್ (Dr. Julie Smith) ಹೇಳುವಂತೆ, 60 ಸೆಕೆಂಡ್‌ಗಳ ಒಂದು ವಿಡಿಯೋ ಸರಿಯಾದ ರೋಗನಿರ್ಣಯ ಮಾಡಲು ಸಾಕಾಗುವುದಿಲ್ಲ.

ಆದ್ದರಿಂದ ನಿಜವಾದ ಸಮಸ್ಯೆ ಏನೆಂದು ತಿಳಿಯಲು ಅರ್ಹತೆ ಹೊಂದಿರುವ ತಜ್ಞರನ್ನು ಸಂಪರ್ಕಿಸುವುದು ಮುಖ್ಯ.

ಪುರುಷರು ಮತ್ತು ಭಾವನೆಗಳು

ಸಾಮಾಜಿಕ ಮಾಧ್ಯಮಗಳಲ್ಲಿ “Toxic Masculinity” ಮತ್ತು “Emotional Repression” ಎಂಬ ಪದಗಳೂ ಹೆಚ್ಚು ಕೇಳಿಬರುತ್ತಿವೆ.

ಸಮಾಜವು ಪುರುಷರ ಮೇಲೆ ಕೆಲವೊಮ್ಮೆ “ಯಾವಾಗಲೂ ಗಟ್ಟಿಯಾಗಿರಬೇಕು, ಧೈರ್ಯವಾಗಿರಬೇಕು, ದುಃಖವನ್ನು ತೋರಿಸಬಾರದು” ಎಂಬ ಒತ್ತಡವನ್ನು ಹಾಕುತ್ತದೆ.

ಇಂತಹ ಒತ್ತಡವು ಅವರ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರಬಹುದು.

ಈ ಬಗ್ಗೆ ಮಾತನಾಡುವುದರಿಂದ ಒಂದು ಮುಖ್ಯ ವಿಷಯ ಅರ್ಥವಾಗುತ್ತದೆ:

ಭಾವನೆಗಳನ್ನು ತೋರಿಸುವುದು ದೌರ್ಬಲ್ಯವಲ್ಲ. ಅದು ಸಹಜ.

ದುಃಖ, ಭಯ, ನೋವು ಅಥವಾ ಒತ್ತಡದ ಬಗ್ಗೆ ಮಾತನಾಡುವುದು ತಪ್ಪಲ್ಲ. ನಮ್ಮ ಭಾವನೆಗಳನ್ನು ಆರೋಗ್ಯಕರವಾಗಿ ವ್ಯಕ್ತಪಡಿಸುವುದು ಮನಸ್ಸಿಗೆ ಒಳ್ಳೆಯದು.

“Gaslighting” — ಈಗ ಎಲ್ಲರೂ ಬಳಸುತ್ತಿರುವ ಒಂದು ಪದ

“Gaslighting” ಎಂದರೆ, ಒಬ್ಬ ವ್ಯಕ್ತಿ ಮತ್ತೊಬ್ಬ ವ್ಯಕ್ತಿಗೆ “ನೀನು ತಪ್ಪಾಗಿ ನೆನಪಿಸಿಕೊಳ್ಳುತ್ತಿದ್ದೀಯ”, “ನಿನಗೆ ಹಾಗೇ ಅನಿಸುತ್ತಿದೆ” ಎಂದು ಪದೇಪದೇ ಹೇಳಿ, ತನ್ನದೇ ನೆನಪು ಮತ್ತು ಭಾವನೆಗಳ ಬಗ್ಗೆ ಅನುಮಾನ ಪಡುವಂತೆ ಮಾಡುವುದು.

ಈ ಪದವನ್ನು ಈಗ ಪ್ರೀತಿ, ಸ್ನೇಹ ಮತ್ತು ಇತರ ಸಂಬಂಧಗಳ ಬಗ್ಗೆ ಮಾತನಾಡುವಾಗ ಹೆಚ್ಚಾಗಿ ಬಳಸಲಾಗುತ್ತಿದೆ.

ಇದು ನಿಜವಾಗಿಯೂ ಯಾರಾದರೂ ತಮ್ಮ ಭಾವನೆಗಳೊಂದಿಗೆ ಆಟವಾಡುತ್ತಿರುವುದನ್ನು ಗುರುತಿಸಲು ಸಹಾಯ ಮಾಡಬಹುದು.

ಆದರೆ ಪ್ರತಿಯೊಂದು ಸಣ್ಣ ಜಗಳವನ್ನೂ ಅಥವಾ ಭಿನ್ನಾಭಿಪ್ರಾಯವನ್ನೂ “Gaslighting” ಎಂದು ಕರೆಯುವುದು ಸರಿಯಲ್ಲ.

ಹೀಗೆ ಎಲ್ಲೆಡೆ ಬಳಸಿದರೆ ಈ ಗಂಭೀರ ಪದದ ನಿಜವಾದ ಅರ್ಥ ಕಡಿಮೆಯಾಗಬಹುದು.

“Toxic Productivity” — ಯಾವಾಗಲೂ ಕೆಲಸ ಮಾಡುತ್ತಲೇ ಇರಬೇಕೆ?

“Toxic Productivity” ಎಂಬ ಪದವೂ ಈಗ ಯುವಜನರಲ್ಲಿ ಹೆಚ್ಚು ಬಳಕೆಯಾಗುತ್ತಿದೆ.

ಅಂದರೆ, “ಯಾವಾಗಲೂ ಕೆಲಸ ಮಾಡಬೇಕು, ಯಾವಾಗಲೂ ಬ್ಯುಸಿಯಾಗಿರಬೇಕು, ಯಾವಾಗಲೂ ಏನಾದರೂ ಸಾಧಿಸುತ್ತಿರಬೇಕು” ಎಂಬ ಒತ್ತಡ.

ಇದರ ಜೊತೆಗೆ “Dopamine Detox” ಮತ್ತು “Time Blindness” ಮುಂತಾದ ಪದಗಳೂ ಜನಪ್ರಿಯವಾಗಿವೆ.

ಇವೆಲ್ಲವೂ ನಮ್ಮ ಸಮಯವನ್ನು ಮತ್ತು ನಮ್ಮ ಕೆಲಸ ಮಾಡುವ ಸಾಮರ್ಥ್ಯವನ್ನು ಇನ್ನಷ್ಟು ಉತ್ತಮಗೊಳಿಸುವ ಬಗ್ಗೆ ನಾವು ಎಷ್ಟು ಯೋಚಿಸುತ್ತಿದ್ದೇವೆ ಎಂಬುದನ್ನು ತೋರಿಸುತ್ತವೆ.

ನಮ್ಮ ಜೀವನದಲ್ಲಿ ಕೆಲಸ ಮತ್ತು ವಿಶ್ರಾಂತಿಯ ನಡುವೆ ಸಮತೋಲನ ಇರಬೇಕು ಎಂಬುದನ್ನು ಅರ್ಥಮಾಡಿಕೊಳ್ಳುವುದು ಒಳ್ಳೆಯದು.

ಆದರೆ ಪ್ರತಿಯೊಂದು ಸಣ್ಣ ವಿಷಯವನ್ನೂ, ಪ್ರತಿಯೊಂದು ಭಾವನೆಯನ್ನೂ ನಿರಂತರವಾಗಿ ವಿಶ್ಲೇಷಿಸುತ್ತಿದ್ದರೆ ಅದೇ ನಮಗೆ ಮಾನಸಿಕ ಒತ್ತಡವನ್ನು ಉಂಟುಮಾಡಬಹುದು.

ಪ್ರೀತಿ ಮತ್ತು ಸಂಬಂಧಗಳಲ್ಲೂ ಹೊಸ ಪದಗಳು

ಪಾಪ್ ಸೈಕಾಲಜಿಯಿಂದ ಪ್ರೀತಿ ಮತ್ತು ಸಂಬಂಧಗಳ ಬಗ್ಗೆ ಮಾತನಾಡಲು ಹಲವು ಹೊಸ ಪದಗಳು ಬಂದಿವೆ.

“Situationship”, “Love Bombing” ಮತ್ತು “Attachment Styles” ಎಂಬ ಪದಗಳು ಈಗ ಸಾಮಾನ್ಯವಾಗಿ ಕೇಳಿಬರುತ್ತಿವೆ.

ಈ ಪದಗಳು ಕೆಲವೊಮ್ಮೆ ನಮ್ಮ ಸಂಬಂಧಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತವೆ.

ಆದರೆ ಅವುಗಳನ್ನು ಅತಿಯಾಗಿ ಬಳಸಿದರೆ, ಸಾಮಾನ್ಯ ಸಂಬಂಧಗಳಲ್ಲಿನ ಸಣ್ಣಪುಟ್ಟ ಸಮಸ್ಯೆಗಳಿಗೂ ತಕ್ಷಣ ಒಂದು ಹೆಸರಿಡುವ ಅಭ್ಯಾಸ ಬೆಳೆಬಹುದು.

ಪ್ರತಿಯೊಂದು ಸಂಬಂಧದಲ್ಲೂ ಕೆಲವೊಮ್ಮೆ ಜಗಳ, ದೂರ, ಬೇಸರ, ಮತ್ತೆ ಹತ್ತಿರವಾಗುವುದು ಸಹಜ.

ಅವೆಲ್ಲವೂ ಮಾನಸಿಕ ಸಮಸ್ಯೆಯ ಲಕ್ಷಣಗಳಲ್ಲ.

ಸಾಮಾಜಿಕ ಮಾಧ್ಯಮದ ವ್ಯಕ್ತಿಗಳೊಂದಿಗೆ ಭಾವನಾತ್ಮಕ ಸಂಬಂಧ

“Parasocial Relationship” ಎಂದರೆ, ಒಬ್ಬ ವ್ಯಕ್ತಿ ಒಬ್ಬ ಪ್ರಸಿದ್ಧ ವ್ಯಕ್ತಿ, ನಟ, ಇನ್‌ಫ್ಲುಯೆನ್ಸರ್ ಅಥವಾ ಯೂಟ್ಯೂಬರ್‌ ಜೊತೆ ಒಂದು ರೀತಿಯ ಭಾವನಾತ್ಮಕ ಸಂಬಂಧ ಹೊಂದಿರುವುದು. ಆದರೆ ಆ ಸಂಬಂಧ ಹೆಚ್ಚಾಗಿ ಒಂದು ಕಡೆಯಿಂದ ಮಾತ್ರ ಇರುತ್ತದೆ.

ಇಂದಿನ ಕಾಲದಲ್ಲಿ ಇನ್‌ಫ್ಲುಯೆನ್ಸರ್‌ಗಳು ಮತ್ತು ಆನ್‌ಲೈನ್ ವ್ಯಕ್ತಿಗಳು ನಮ್ಮ ಜೀವನದ ಒಂದು ಭಾಗವಾಗಿದ್ದಾರೆ.

ಆದ್ದರಿಂದ ಸಾಮಾಜಿಕ ಮಾಧ್ಯಮದಲ್ಲಿ ನಾವು ನೋಡುವ ವ್ಯಕ್ತಿಯ ಜೀವನ ಮತ್ತು ಅವರ ನಿಜ ಜೀವನ ಒಂದೇ ಆಗಿರಬೇಕೆಂದಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯ.

ಆನ್‌ಲೈನ್ ಸಂಬಂಧಗಳಿಗೂ ಒಂದು ಮಿತಿ ಇರಬೇಕು.

ಪಾಪ್ ಸೈಕಾಲಜಿಯ ಒಳ್ಳೆಯ ಪರಿಣಾಮಗಳು

ಪಾಪ್ ಸೈಕಾಲಜಿಯಿಂದ ಕೆಲವು ಒಳ್ಳೆಯ ಬದಲಾವಣೆಗಳೂ ಆಗಿವೆ.

ಮುಖ್ಯವಾಗಿ, ಮಾನಸಿಕ ಆರೋಗ್ಯದ ಬಗ್ಗೆ ಜನರಲ್ಲಿ ಅರಿವು ಹೆಚ್ಚಾಗಿದೆ.

ಹಿಂದೆ ಮಾನಸಿಕ ಸಮಸ್ಯೆಗಳ ಬಗ್ಗೆ ಮಾತನಾಡಲು ಹಲವರು ಹಿಂಜರಿಯುತ್ತಿದ್ದರು. ಈಗ ಜನರು ತಮ್ಮ ಭಾವನೆಗಳು ಮತ್ತು ಸಮಸ್ಯೆಗಳ ಬಗ್ಗೆ ಹೆಚ್ಚು ಮುಕ್ತವಾಗಿ ಮಾತನಾಡುತ್ತಿದ್ದಾರೆ.

ಇದರಿಂದ ಅಗತ್ಯವಿದ್ದಾಗ ತಜ್ಞರ ಸಹಾಯ ಪಡೆಯಲು ಜನರಿಗೆ ಧೈರ್ಯ ಬರುತ್ತಿದೆ.

ಅದೇ ರೀತಿ, “ನಾನು ಮಾತ್ರ ಹೀಗೆ ಅನುಭವಿಸುತ್ತಿದ್ದೇನೆ” ಎಂಬ ಒಂಟಿತನದ ಭಾವನೆಯೂ ಕೆಲವರಿಗೆ ಕಡಿಮೆಯಾಗಬಹುದು.

ನಮ್ಮ ಕೆಲವು ಭಾವನೆಗಳು ಮತ್ತು ಅನುಭವಗಳು ಜೀವನದ ಸಹಜ ಭಾಗಗಳೇ ಎಂಬುದನ್ನು ಅರ್ಥಮಾಡಿಕೊಳ್ಳುವುದು ಕೂಡ ಮನಸ್ಸಿಗೆ ನೆಮ್ಮದಿ ನೀಡಬಹುದು.

ಆದರೆ ಕೆಲವು ಅಪಾಯಗಳೂ ಇವೆ

ಇದರ ಮತ್ತೊಂದು ಮುಖವೂ ಇದೆ.

ಕಷ್ಟವಾದ ಮನೋವಿಜ್ಞಾನದ ವಿಷಯಗಳನ್ನು ತುಂಬಾ ಸರಳವಾಗಿ ಹೇಳುವುದರಿಂದ ಜನರು ತಪ್ಪಾಗಿ ಅರ್ಥಮಾಡಿಕೊಳ್ಳಬಹುದು.

ಕೆಲವರು ಸಾಮಾಜಿಕ ಮಾಧ್ಯಮದ ಮಾಹಿತಿಯನ್ನು ನೋಡಿ ತಮಗೆ ತಾವೇ ರೋಗವಿದೆ ಎಂದುಕೊಳ್ಳಬಹುದು ಅಥವಾ ತಮಗೆ ತಾವೇ ಚಿಕಿತ್ಸೆ ಮಾಡಿಕೊಳ್ಳಲು ಪ್ರಯತ್ನಿಸಬಹುದು.

ಇದು ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸಬಹುದು.

ಅದೇ ರೀತಿ, ನಮ್ಮ ಪ್ರತಿಯೊಂದು ಭಾವನೆ ಮತ್ತು ವರ್ತನೆಯನ್ನು ಯಾವಾಗಲೂ ಪರಿಶೀಲಿಸುತ್ತಾ ಇದ್ದರೆ ಕೆಲವರಲ್ಲಿ ಆತಂಕ ಹೆಚ್ಚಾಗಬಹುದು.

ಮುಖ್ಯವಾಗಿ, ಸಾಮಾನ್ಯ ಜೀವನದ ಭಾವನೆಗಳು ಮತ್ತು ನಿಜವಾದ ಮಾನಸಿಕ ಸಮಸ್ಯೆಗಳ ನಡುವಿನ ವ್ಯತ್ಯಾಸವನ್ನು ನಾವು ಮರೆಯಬಾರದು.

ಉದಾಹರಣೆಗೆ, ಕೆಲವೊಮ್ಮೆ ದುಃಖವಾಗುವುದು, ಕೋಪ ಬರುವುದು, ಚಿಂತೆ ಆಗುವುದು ಅಥವಾ ಯಾವುದಾದರೂ ಕೆಲಸ ಮಾಡಲು ಮನಸ್ಸಾಗದಿರುವುದು ಮಾತ್ರದಿಂದಲೇ ನಮಗೆ ಮಾನಸಿಕ ಕಾಯಿಲೆ ಇದೆ ಎಂದು ಹೇಳಲು ಸಾಧ್ಯವಿಲ್ಲ.

ಬೇಕಾಗಿರುವುದು ಸರಿಯಾದ ಸಮತೋಲನ

ಪಾಪ್ ಸೈಕಾಲಜಿ ಮುಂದುವರಿಯುತ್ತಿರುವಂತೆ, ಮಾಹಿತಿ ಎಲ್ಲರಿಗೂ ಸುಲಭವಾಗಿ ಸಿಗಬೇಕು; ಆದರೆ ಆ ಮಾಹಿತಿ ಸರಿಯಾಗಿಯೂ ಇರಬೇಕು.

ಈ ಎರಡರ ನಡುವೆ ಸಮತೋಲನ ಬಹಳ ಮುಖ್ಯ.

ಈಗ ಅನೇಕ ಮಾನಸಿಕ ಆರೋಗ್ಯ ತಜ್ಞರು ಕೂಡ ಸಾಮಾಜಿಕ ಮಾಧ್ಯಮಗಳ ಮೂಲಕ ಸರಿಯಾದ ಮತ್ತು ವೈಜ್ಞಾನಿಕ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾರೆ. ತಪ್ಪು ಮಾಹಿತಿಗಳನ್ನು ಸರಿಪಡಿಸುವ ಕೆಲಸವನ್ನೂ ಮಾಡುತ್ತಿದ್ದಾರೆ.

ಇದರಿಂದ ಮಾನಸಿಕ ಆರೋಗ್ಯದ ಬಗ್ಗೆ ನಡೆಯುವ ಚರ್ಚೆಗಳು ಕೇವಲ ಟ್ರೆಂಡ್‌ಗಳ ಮೇಲೆ ಅಲ್ಲದೆ, ಸರಿಯಾದ ಮಾಹಿತಿಯ ಮೇಲೆ ಆಧಾರವಾಗಲು ಸಹಾಯವಾಗುತ್ತದೆ.

ಸಾಮಾಜಿಕ ಮಾಧ್ಯಮದಲ್ಲಿ ಮಾನಸಿಕ ಆರೋಗ್ಯದ ಮಾಹಿತಿ ನೋಡುವಾಗ ಏನು ಮಾಡಬೇಕು?

ಮಾನಸಿಕ ಆರೋಗ್ಯದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಏನಾದರೂ ನೋಡಿದಾಗ ತಕ್ಷಣ ನಂಬಿಬಿಡಬಾರದು. ಸ್ವಲ್ಪ ಯೋಚಿಸಬೇಕು.

ನಮ್ಮಲ್ಲಿ ನಾವೇ ಕೆಲವು ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು:

– ಈ ಮಾಹಿತಿಯನ್ನು ಯಾರು ನೀಡಿದ್ದಾರೆ?
– ಅವರು ಈ ವಿಷಯದ ತಜ್ಞರೇ?
– ಅವರು ಹೇಳುತ್ತಿರುವುದಕ್ಕೆ ಸರಿಯಾದ ವೈಜ್ಞಾನಿಕ ಆಧಾರವಿದೆಯೇ?
– ಬೇರೆ ತಜ್ಞರೂ ಇದೇ ಮಾತನ್ನು ಹೇಳುತ್ತಾರೆಯೇ?
– ನನಗೆ ನಿಜವಾಗಿಯೂ ಸಮಸ್ಯೆ ಇದ್ದರೆ, ನಾನು ತಜ್ಞರನ್ನು ಸಂಪರ್ಕಿಸಬೇಕೇ?

ಸಾಮಾಜಿಕ ಮಾಧ್ಯಮವು ಮಾನಸಿಕ ಆರೋಗ್ಯದ ಬಗ್ಗೆ ತಿಳಿದುಕೊಳ್ಳಲು ಮತ್ತು ಚರ್ಚೆ ಆರಂಭಿಸಲು ಒಳ್ಳೆಯ ಸ್ಥಳವಾಗಬಹುದು.

ಆದರೆ ಅದು ತಜ್ಞರ ಸಲಹೆಗೆ ಎಂದಿಗೂ ಬದಲಿಯಾಗಬಾರದು.

ಕೊನೆಯ ಮಾತು

ಯುವಜನರಲ್ಲಿ ಮಾನಸಿಕ ಆರೋಗ್ಯ ಮತ್ತು ತಮ್ಮನ್ನು ತಾವು ಅರ್ಥಮಾಡಿಕೊಳ್ಳುವ ಆಸಕ್ತಿ ಹೆಚ್ಚುತ್ತಿರುವುದರಿಂದ ಪಾಪ್ ಸೈಕಾಲಜಿಯೂ ಹೆಚ್ಚು ಜನಪ್ರಿಯವಾಗುತ್ತಿದೆ.

ಹೊಸ ಹೊಸ ಪದಗಳು ನಮ್ಮ ಭಾವನೆಗಳು ಮತ್ತು ಅನುಭವಗಳನ್ನು ಹೇಳಿಕೊಳ್ಳಲು ಸಹಾಯ ಮಾಡುತ್ತವೆ.

ಆದರೆ ಪ್ರತಿಯೊಂದು ಟ್ರೆಂಡಿ ಪದವನ್ನೂ ನಮ್ಮ ಜೀವನಕ್ಕೆ ತಕ್ಷಣ ಅನ್ವಯಿಸಿಕೊಳ್ಳುವುದು ಸರಿಯಲ್ಲ.

ಆದ್ದರಿಂದ ಈ ಹೊಸ ವಿಚಾರಗಳನ್ನು ತೆರೆದ ಮನಸ್ಸಿನಿಂದ ಕೇಳೋಣ; ಆದರೆ ಯೋಚಿಸಿ ಮತ್ತು ಎಚ್ಚರಿಕೆಯಿಂದ ಸ್ವೀಕರಿಸೋಣ.

ಸಾಮಾಜಿಕ ಮಾಧ್ಯಮದಿಂದ ಸಿಗುವ ಮನೋವಿಜ್ಞಾನದ ಮಾಹಿತಿಯನ್ನು ಅರಿವು ಹೆಚ್ಚಿಸಿಕೊಳ್ಳಲು ಬಳಸೋಣ, ಆದರೆ ಸ್ವಯಂ-ರೋಗನಿರ್ಣಯಕ್ಕಾಗಿ ಬಳಸಬೇಡಿ.

ಸರಿಯಾದ ರೀತಿಯಲ್ಲಿ ಬಳಸಿದರೆ, ಪಾಪ್ ಸೈಕಾಲಜಿ ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಮತ್ತು ಉತ್ತಮ ಕಾಳಜಿ ವಹಿಸಲು ಒಂದು ಸೇತುವೆಯಂತೆ ಕೆಲಸ ಮಾಡಬಹುದು.

ಆದರೆ ಅದು ಎಂದಿಗೂ ಅರ್ಹತೆ ಹೊಂದಿರುವ ಮಾನಸಿಕ ಆರೋಗ್ಯ ತಜ್ಞರ ಸಲಹೆಗೆ ಪರ್ಯಾಯವಾಗಬಾರದು.

ಮೂಲ ಲೇಖಕರು:
ಟೀಮ್ ಉಮ್ಮೀದ್ ಡಿ-ಅಡಿಕ್ಷನ್ ಮತ್ತು ರಿಹ್ಯಾಬ್ ಸೆಂಟರ್, ಬೆಂಗಳೂರು( Team Ummeed De-addiction and Rehab Centre, Bangalore)

ಕನ್ನಡ ಅನುವಾದ:
ಸೈಯದಾ ಅಫ್ರಶೀಮ್ ಉಸ್ಮಾನಿ

Leave a Comment

Your email address will not be published. Required fields are marked *